ಸೆಳಕು
ಹಲ್ಲು ಕಿಸಿದು ಬೇಡುವ ರೀತಿ ನನ್ನದಲ್ಲ
ನೀ ಬಾರದೆ ನಾ ಸೋತರೂ ಅಲ್ಲಿಗೇ ಬಿಡುವುದಿಲ್ಲ
ನಿನ್ನ ದಯೆ ಬೇಕಿಲ್ಲ. ಅದಕ್ಕಾಗಿ ಕೈ ಚಾಚಿಲ್ಲ.
ದಟ್ಟ ಸಂದಣಿ ಗೋಜಲು ದಾರಿಗಳಲ್ಲಿ ಕಳೆದು ಹೋದರೂ ಸರಿ
ಸಮುದ್ರ ಮುಳುಗಿದ ಟೈಟಾನ್ ಗೋಳು ನನಗೇ ಬರಲಿ
ಇದ್ದಷ್ಟೇ ದಿನ ಆಯಿತು. ಹೆದರುವುದು ನನ್ನ ಜಾಯಮಾನವಲ್ಲ
ಇರಬಹುದು ದರವೇಸಿ ಕ್ಷುಲ್ಲಕ ಹೀನ ಸ್ಥಿತಿ
ಕಿರಿಕಿರಿ ಇಂಗಿತ ಕೆದಕಿ ಕೆಣಕಿ ತೀಟೆ ಜಗಳಕೆ-
ಜಾರಿ ತೇಲುವ ಹರಿತ ಮಾತುಗಳೇನು ಮಾಡುವವೋ
ಮೊಂಡು ಭಂಡಾಟಗಳ ತೊಡರುಗಾಲಿನ ಗೊಂದಲಗಳ
ಕೆಡವಿ ಕೆಚ್ಚೆದೆಯ ಮೂಳೆಗಳ ಪುಡಿ ಚೆಲ್ಲಾಡುವುದೆ?
ಸರಿಯೆ, ಸವರುವುದು ಕಡಿದು ಮುನ್ನುಗ್ಗುವುದು ಉಳಿಕೆ.
ಬಿರಿದು ನುಗ್ಗುವ ಛಾತಿಗೆ ಕೋಡು ಮೂಡುವ ಜೀವಬಂದಿ ಲಾಲಿ
ಮಿಣಿಮಿಣಿ ಮಿಡಿವ ಸ್ಪಂದನಕೆ ಬೊಚ್ಚು ಬಾಯಿಯ ಬೆಳಕು ಸೆಳಕು
'ಬೆಳಗೆದ್ದು ನಿಂತರೆ' ಕವನ ಸಂಕಲನದಿಂದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ